*ಜೀವ–ಭಾವ

ಕಾವ್ಯಯಾನ

*ಜೀವ–ಭಾವ

ಅಬ್ಳಿ,ಹೆಗಡೆ

ಕಾಣದಡವಿಯಲೆಲ್ಲೊ
ಹೂಅರಳೆ,ಪರಿಮಳಕೆ
ದುಗುಡತುಂಬಿದ ಮನವು
ತುಡಿವುದೇಕೊ.?
. ದೂರದೆತ್ತರ ಮರದಿ,
ಪುಟ್ಟಹಕ್ಕಿಯು ಉಲಿಯೆ
ನೋವುತುಂಬಿದ ಮನವು
. ನಲಿವುದೇಕೊ..?
ಮಳೆಯೊಳಗೆ ಬಿಸಿಲಿಳಿಯೆ,
ಮೂಡೆ ಕಾಮನ ಬಿಲ್ಲು,
ಸಪ್ತವರ್ಣದ ಬಣ್ಣ
“ಬದುಕ”ಲೇಕೊ,,?
ನೇಸರಿಲ್ಲದ ರಾತ್ರಿ,
ಇರುಳು ಕತ್ತಲೆ ಧಾತ್ರಿ,
ಬೆಳಕು ತುಂಬಿದ ಮನದಿ
ಕತ್ತಲೇಕೊ,,,?
. ಎಲ್ಲೊ, ಯಾರದೋ ಮಗುವು
ಹಸಿವಿನಿಂದಳುವಾಗ,
ಹೊಟ್ಟೆ ತುಂಬಿದ ತಾಯ
ಅಳುವದೇಕೊ,,,?
ತಾಯಿ, ಹಸು ದೂರದಲಿ-
ಕರುವು “ಅಂಬಾ”ಎನಲು
ಕರುಳ ಕುಡಿಯಾ ಸೆಳೆತ,
“ನನ್ನ”ಲೇಕೊ,,,?
ಹುಣ್ಣಿಮೆಯ ಚಂದ್ರಮನು
ತಂಪು,ಕಾಂತಿಯ ಚೆಲ್ಲೆ
ಉರಿವ ಮನವಾರಿಸುವ
. ತಂಪು ಏಕೊ..?
ಅರಿವಿರದ ಯಾರದೋ
“ಸಾವ”ಸುದ್ದಿಯ ಕೇಳೆ
ತಳ,ಮಳವು ಒಡಲೊಳಗೆ
ದುಃಖವೇಕೊ,,,?
ಕಡಲ ಒಡಲಿನ ತೆರೆಯ
ಹೊಯ್ದಾಟ,ಭೋರ್ಗರೆತ
ಸ್ತಭ್ಧ ಮನವನು ಕಲಕಿ
ಮೊರೆವುದೇಕೊ,,,?
ನಿತ್ಯ ಜಗದೊಡಲಿನಲಿ
. ನಡೆವ ಸ್ತಿತ್ಯಂತರಕೆ,
ಕವಿಮನದಿ ಹೊಸ ಕನಸು
ಮೊಳೆವುದೇಕೊ,,,?
ಕಣ್ಣು ಕಾಣದ ದ್ರಶ್ಯ,
ಕಿವಿಯು ಕೇಳದ ಶಬ್ದ
ಅರ್ಥವಿಲ್ಲದ ವ್ಯಾಖ್ಯೆ,
ಯಾಕೆ ಬೇಕು,,?
ಪ್ರಶ್ನೆಗುತ್ತರ ಇಲ್ಲ,
ತರ್ಕ ಸಾಧ್ಯವೆ ಇಲ್ಲ,
ಜೀವ-ಭಾವದ ನಂಟು
ಅಷ್ಟುಸಾಕು.,,,,,!

******************

One thought on “*ಜೀವ–ಭಾವ

Leave a Reply

Back To Top